ಜೀವ ಭಾಷಾವಿಜ್ಞಾನ -
ಜೀವಭಾಷಾವಿಜ್ಞಾನವೆಂಬುದು ಮಾನವ ಭಾಷೆಯ ಬಗೆಗಿನ ಜೈವಿಕ ಆಧಾರಗಳನ್ನು ಕುರಿತ ಅಧ್ಯಯನ. ಅಂದರೆ ಜೀವ-ವೈಜ್ಞಾನಿಕ ದೃಷ್ಟಿಯಿಂದ ನಡೆಸಲಾಗುವ ಭಾಷೆಯ ಅಧ್ಯಯನ; ಮಾನವ ಭಾಷೆ ಹೇಗೆ ರೂಪುದಳೆಯಿತು? ಸಂವಹನದ ಒಂದು ಆದಿಮ ರೂಪದಿಂದ ಅದು ರೂಪುದಳೆಯಿತೆ? ಮಕ್ಕಳಿಗೆ ಭಾಷೆ ಹೇಗೆ ಬರುತ್ತದೆ? ಪರಿಪಕ್ವೋನ್ಮುಖೀ ಪ್ರಕ್ರಿಯೆ ಹಾಗೂ ಭಾಷೆಯ ಉಪಾರ್ಜನೆ-ಇವುಗಳ ನಡುವೆ ಯಾವುದಾದರೂ ಕಾರಣಿಕ ಸಂಬಂಧಗಳಿವೆಯೇ? ಮಾನವ ಮಿದುಳಿನಲ್ಲಿ ಭಾಷೆ ಹೇಗೆ ಸಂಘಟಿತಗೊಳ್ಳುತ್ತದೆ ?-ಇಂಥ ಪ್ರಶ್ನೆಗಳಿಗೆ ಇದು ಸಂಬಂಧಪಟ್ಟಿದೆ.

ಮಾನವ ಜೀವಗಳಲ್ಲಿನ ಭಾಷಿಕವರ್ತನೆಯನ್ನು ಅರ್ಥಮಾಡಿಕೊಳ್ಳುವುದಕ್ಕೆ ಸಂಬಂಧಪಟ್ಟಿರುವ ಜೀವವಿಜ್ಞಾನದ ಎಲ್ಲ ಅಂಶಗಳನ್ನೂ ಈ ಶಿಕ್ಷಣ ಒಳಗೊಂಡಿರುತ್ತದೆ (ಮೀಡರ್ ಮತ್ತು ಮುಯ್‍ಸ್ಕಾನ್ಸ್). ಜೀವಭಾಷಾವಿಜ್ಞಾನ ಅನೇಕ ಶಿಕ್ಷಣಗಳ ಕೂಡುಭೂಮಿ. ಜೀವವಿಜ್ಞಾನ, ತಂತ್ರಿಕಾವಿಜ್ಞಾನ, ಜೈವವಾಸಿಕ ವಿಜ್ಞಾನ, ತಂತ್ರಿಕಾ ಮನೋವಿಜ್ಞಾನ ಮತ್ತು ಭಾಷಾವಿಜ್ಞಾನಗಳಂಥ ಅನೇಕ ಶಿಕ್ಷಣವಲಯಗಳಿಗೆ ಸೇರಿದ ಕೂಡುನೆಲೆ ಇದಾಗುವುದರಿಂದ ಇದನ್ನು ಅಂತರ ಶಿಕ್ಷಣ ವಿಜ್ಞಾನವೆಂದು ಕರೆಯುವುದು ಉಚಿತವಾಗಿಯೇ ತೋರುತ್ತದೆ.

	ಭಾಷೆಯ ಹುಟ್ಟು ಅಥವಾ ಉತ್ಪತ್ತಿ ಹಾಗೂ ವ್ಯಕ್ತಿಯಲ್ಲಿನ ಭಾಷಾ ವ್ಯವಸ್ಥೆಯ ಕಾರ್ಯಶೀಲತೆ-ಈ ಎರಡು ಪ್ರಮುಖ ಅಂಶಗಳ ದೃಷ್ಟಿಯಿಂದ ಭಾಷಾವಿಜ್ಞಾನದಲ್ಲಿ ಮುಖ್ಯವಾಗಿ ಜೀವವಿಜ್ಞಾನದ ಅಗತ್ಯ ಏರ್ಪಡುತ್ತದೆ; ಇವು ಮೂಲತಃ ಜೀವವಿಜ್ಞಾನದ ಪ್ರಕ್ರಿಯೆಗಳು; ಇವುಗಳಲ್ಲಿ ಮೊದಲನೆಯದು ಆಂಗಿಕ ವಿಕಾಸದ ಪರಿಣಾಮ; ಎರಡನೆಯದು ತಂತ್ರಿಕಾಪೇಶೀಕ್ರಿಯಾವಿಜ್ಞಾನದ ಸಮಸ್ಯೆ (ಕೃಷ್ಣಮೂರ್ತಿ).

	ಇದರ ಸ್ವರೂಪವನ್ನು ವಿವರಿಸುವ ದೃಷ್ಟಿಯಿಂದ ಈ ವಲಯದ ಕೆಲವು ಸಮಸ್ಯೆಗಳನ್ನು ಇಲ್ಲಿ ಚರ್ಚಿಸಲಾಗಿದೆ.
ಸಮಸ್ಯೆಗಳು: I. ಭಾಷೆಯ ಹುಟ್ಟು : ಜೀವಭಾಷಾವಿಜ್ಞಾನದ ಪರಿಪ್ರೇಕ್ಷ್ಯದಲ್ಲಿ ಭಾಷೆಯನ್ನು ಹೋಮೋ ಸೇಪಿಯನ್ನುಗಳ ಎರಡನೆಯ ಸಂಕೇತನ ವ್ಯವಸ್ಥೆ ಎಂಬುದಾಗಿ ಪರಿಗಣಿಸಬಹುದು. ಮಾತು ಮತ್ತು ಕೆಲಸದ ಸಂಯುಕ್ತ ಕ್ರಿಯೆಯ ಅಂಗವಾಗಿ ಮಿದುಳು ಮತ್ತು ಅಂಗಗಳು ಪರಿವರ್ತನೆ ಹೊಂದಿದುವು ಎಂಬುದು ಪ್ಯಾವಲೋಫನ ಅಭಿಪ್ರಾಯ. ಹೀಗೆ, ಮಾನವನ ವಿಕಾಸದಲ್ಲಿ ಮಾತು ಬಹುಮಟ್ಟಿಗೆ ನೆರವಾಗಿದೆ. ಭಾಷೆಯ ಹುಟ್ಟಿನ ಬಗೆಗಿನ ಸಿದ್ಧಾಂತವೊಂದರ ಮೌಲ್ಯವನ್ನು ವಿಕಾಸದ ಬಗೆಗಿನ ಸಾಮಾನ್ಯ ಜೀವವೈಜ್ಞಾನಿಕ ಸಿದ್ಧಾಂತದ ದೃಷ್ಟಿಯಿಂದ ಒತ್ತಿಹೇಳಬೇಕಾದ ಅಗತ್ಯವಿಲ್ಲ.

	ಪ್ರಾಣಿಗಳಲ್ಲಿನ ಸಂವಹನ ವ್ಯವಸ್ಥೆಯನ್ನು ಹೋಲುವಂಥ ಅತ್ಯಂತ ಆದಿಮ ಸ್ವರೂಪದ ಸಂವಹನ ವ್ಯವಸ್ಥೆಯಿಂದ ಎಂದೋ ಒಮ್ಮೆ ಮಾನವ ಭಾಷೆಯೂ ರೂಪುದಳೆದಿರಬೇಕೆಂಬುದೇ ಭಾಷೆಯ ಹುಟ್ಟಿನ ಬಗೆಗಿನ ರಹಸ್ಯದ ಸಂಬಂಧದಲ್ಲಿ ವ್ಯಾಪಕ ಪ್ರಾಚುರ್ಯವನ್ನು ಪಡೆದಿರುವ ವೈಜ್ಞಾನಿಕ ನಂಬಿಕೆ. ಈ ಸಮಸ್ಯೆಯ ಬಗೆಗೆ ಅಧ್ಯಯನ ನಡೆಸಿರುವ ಜೇನ್ ಗುಡಾಲ್ ಎಂಬ ಬ್ರಿಟಿಷ್ ಜೈವವಾಸಿಕ ವಿಜ್ಞಾನಿ ಈಚೆಗೆ, ಚಿಂಪಾಂಜಿಗಳೂ ಅಂಗಚೇಷ್ಟೆ, ಭಂಗಿ, ಮುಖಭಾವ ಹಾಗೂ ಸದ್ದುಗಳಿಂದ ಕೂಡಿರುವ ಜಟಿಲವಾದ ಸಂವಹನ ವ್ಯವಸ್ಥೆಯೊಂದನ್ನು ಹೊಂದಿವೆ ಎಂಬುದಾಗಿ ಘೋಷಿಸಿದ್ದಾಳೆ. ತನ್ನ ದೈನಂದಿನ ಅಂತರಕ್ರಿಯೆಯಲ್ಲಿ ಚಿಂಪಾಂಜಿಗಳಿಗೆ ಸುದ್ದಿಯನ್ನು ತಲಪಿಸಲು ಸಾಧ್ಯವಾಗಿದ್ದುದಾಗಿ ಆಕೆ ತಿಳಿಸಿದ್ದಾಳೆ. ಗುಡಾಲಳ ಅಭಿಪ್ರಾಯದಲ್ಲಿ ಇದು ಮಾನವನಿಗೂ ಚಿಂಪಾಂಜಿಗಳಿಗೂ ಉಭಯ ಸಾಮಾನ್ಯ ಪೂರ್ವಜನೊಬ್ಬನಿದ್ದನೆಂಬುದನ್ನು ಸೂಚಿಸುತ್ತದೆ. ಚಿಂಪಾಂಜಿಗಳ ವರ್ತನೆಯನ್ನು ಅರ್ಥಮಾಡಿಕೊಂಡಲ್ಲಿ, ಅದು ಶಿಲಾಯುಗದ ನಮ್ಮ ಪೂರ್ವಜರ ವರ್ತನೆಯ ಬಗೆಗೂ ಬೆಳಕು ಚೆಲ್ಲಬಹುದೆಂದು ಹೇಳಿಕೊಂಡಿದ್ದಾಳೆ. ಆದರೆ, ಆದಿಮ ಸಂವಹನ ವ್ಯವಸ್ಥೆ ಹಾಗೂ ಮಾನವ ಭಾಷೆ-ಇವುಗಳ ನಡುವೆ ಅಗಾಧ ಕಮರಿಯೊಂದಿದೆ ಎಂಬುದು ಜೆ.ಸಿ.ಮಾರ್ಷಲ್, ಲಂಕಾಸ್ಟರ್, ರೆಯ್‍ನಾಲ್ಡ್ಸ್ ಮತ್ತು ಹಾಕೆಟ್ ಅವರುಗಳ ಅಭಿಪ್ರಾಯ. ಜ್ಞಾನಸಂಚಯ ಅಗಾಧವಾಗಿ ಪರಣಮಿಸಿದ್ದರೂ ಭಾಷೆಯ ಹುಟ್ಟಿನ ಬಗೆಗಿನ ಜೀವವೈಜ್ಞಾನಿಕ ಸಿದ್ಧಾಂತವೊಂದನ್ನು ಮುಂದುವರಿಸುವುದು ವಿದ್ವಾಂಸರಿಗೆ ಇನ್ನೂ ಸಾಧ್ಯವಾಗಿಲ್ಲ.

II. ಭಾಷೆಯ ಉಪಾರ್ಜನೆ : ಮಕ್ಕಳು ಭಾಷೆಯನ್ನು ಹೇಗೆ ಕಲಿಯುತ್ತಾರೆಂಬ ಪರಂಪರಾಗತ ಪ್ರಶ್ನೆಯತ್ತ ತಿರುಗೋಣ. ಮಕ್ಕಳು ಭಾಷೆಯನ್ನು ಕಲಿಯುವ ಬಗೆಗೆ ಜೀವಭಾಷಾವಿಜ್ಞಾನಗಳ, ಭಾಷಾವಿಜ್ಞಾನ ಮತ್ತು ಮನೋವಿಜ್ಞಾನಿಗಳ ಸಿದ್ಧಾಂತಗಳು ಬೇರೆ ಬೇರೆಯಾಗಿದೆ. ದೈಹಿಕ ಪರಿಪಕ್ವತೆ ಸಾಧಿತವಾಗುತ್ತ ಬಂದಂತೆ ಮಕ್ಕಳು ಭಾಷೆಯನ್ನು ಕಲಿಯತೊಡಗುತ್ತಾರೆಂಬುದು ಜೀವಭಾಷಾವಿಜ್ಞಾನಿಗಳ ದೃಷ್ಟಿಕೋನ. ಮಕ್ಕಳಲ್ಲಿ ದೈಹಿಕ ಪರಿಪಕ್ವತೆ ಮತ್ತು ಭಾಷಾವಿಕಾಸ-ಇವುಗಳ ನಡುವೆ ನಿರ್ದಿಷ್ಟವಾದ ಸಂಬಂಧವೊಂದು ಇರಲೇಬೇಕೆಂದು ಅವರು ನಂಬಿರುವಂತೆ ತೋರುತ್ತದೆ.

ಭಾಷೆಯನ್ನು ಕಲಿಯುವ ಬಗೆಗಿನ ಮಗುವಿನ ಸಾಮಥ್ರ್ಯ ದೈಹಿಕ ಪರಿಪಕ್ವತೆಯ ಪರಿಣಾಮವೆಂದು ಲೆನ್‍ಬರ್ಗ್ ಅಭಿಪ್ರಾಯಪಡುತ್ತಾರೆ. ಇದಕ್ಕೆ ಅವರು ಕೊಡುವ ಕಾರಣಗಳು ಹೀಗಿವೆ: 1. ಭಾಷೆಯ ಉಪಾರ್ಜನೆಯ ಮೈಲಿಗಲ್ಲುಗಳು ಸಾಮಾನ್ಯವಾಗಿ ಇತರ ಆರ್ಜನೆಯ ಮೈಲಿಗಲ್ಲುಗಳೊಡನೆ (ಭಂಗಿ ನಿಲುವು, ಚಲನೆ ಹಾಗೂ ಗತಿ ಸಾಮರಸ್ಯ) ಸಂಬದ್ಧವಾಗಿರುತ್ತವೆ; 2. ಮಾನಸಿಕ ಹಿನ್ನೆಡೆಯ ಹಲವು ಬಗೆಗಳಲ್ಲಾಗುವಂತೆ ಪರಿಪಕ್ವನದ ಸಂಪೂರ್ಣ ಗತಿಯೇ ವಿಲಂಬಿತವಾದರೂ ಈ ಏಕಕಾಲೀನತೆ ಬಹುತೇಕ ಉಳಿದುಕೊಂಡು ಬರುತ್ತದೆ; 3. ದೈಹಿಕ ಪರಿಪಕ್ವತೆಯಲ್ಲಿ ಹಿನ್ನೆಡೆದಿರುವ ಮಗುವನ್ನು ತೀವ್ರ ತರಬೇತಿಯ ಕ್ರಮಗಳಿಗೆ ಒಳಪಡಿಸಿದರೂ ಭಾಷಾವಿಕಾಸದ ಉನ್ನತಸ್ತರಗಳನ್ನು ಸಾಧಿಸಬಹುದೆಂಬುದಕ್ಕೆ ಯಾವ ಆಧಾರವೂ ಇಲ್ಲ.

ಒಟ್ಟಿನಲ್ಲಿ ಭಾಷಾ ಉಪಾರ್ಜನೆಯ ಸಂಧಿಸ್ಥ ಅವಧಿಯೊಂದು ಇರುತ್ತದೆಂಬುದಕ್ಕೆ ಜೀವಭಾಷಾವಿಜ್ಞಾನಿಗಳು ಒಪ್ಪುತ್ತಾರೆ. ಈ ಸಂಧಿಸ್ಥ ಅವಧಿಯ ಆರಂಭ ಕಾಲದಲ್ಲಿ ಪರಿಪಕ್ವನದ ಕೊರತೆಯಿಂದಾಗಿ ಭಾಷಾ ಉಪಾರ್ಜನೆ ಪರಿಮಿತಿಗೊಳ್ಳುತ್ತದೆ. ಹೊಂದಾಣಿಕೆ ಅಥವಾ ಸಮಾಯೊಜನೆ ನಷ್ಟಗೊಳ್ಳುವುದಕ್ಕೂ ಮಿದುಳಿನ ಪುನಸ್ಸಂಘಟನಾ ಅಸಾಮಥ್ರ್ಯಕ್ಕೂ ಈ ಸಂಧಿಸ್ಥ ಅವಧಿಯ ಕೊನೆಗಾಣುವಿಕೆಗೂ ಸಂಬಂಧವಿರುವಂತೆ ತೋರುತ್ತದೆ. ತಾರುಣ್ಯಾವಸ್ಥೆಯ ಹಂತವನ್ನು ತಲಪುವ ಹೊತ್ತಿಗೆ ಪ್ರಮಸ್ತಿಷ್ಕೀಯ ಸ್ಥಾನೀಕರಣ ದೃಢವಾಗಿ ಏರ್ಪಟ್ಟಿರುತ್ತದೆ.

ಪ್ರತಿಯೊಂದು ನವಜಾತ ಸಾಮಾನ್ಯ ಶಿಶುವಿಗೂ ಭಾಷೆಯ ಅಮೂರ್ತ ರಚನೆಗೆ ಸಂವಾದಿಯಾಗಿರುವಂಥ ಅಂತಸ್ಥ ಮನೋವೃತ್ತಿ ಲಭ್ಯವಾಗಿರುತ್ತದೆಂದು ಜೀವಭಾಷಾವಿಜ್ಞಾನಿಗಳು ನಂಬಿದ್ದಾರೆ. ಮಗು ಆಂತರಿಕವಾಗಿ ಸನ್ನದ್ಧವಾಗಿರುವ ಸಂಗತಿಗಳಿಗೆ ಸೂಕ್ತವಾದಂಥ ಪರಿಸ್ಥಿತಿಗಳನ್ನು ಒದಗಿಸಿದಾಗ, ಆ ಸಂಗತಿಗಳು ಸಿದ್ಧರೂಪದಲ್ಲಿ ಹಾಗೂ ಸಹಜವಾಗಿ ಹೊರಹೊಮ್ಮುತ್ತವೆ. ರೋಮನ್ ಯಾಕಬ್‍ಸನ್ನನ ಅಭಿಪ್ರಾಯದಲ್ಲಿ, ಭಾಷಿಕ ರಚನೆಗಳ ಉತ್ಸರ್ಪಿಣೀ ಕ್ರಮಕ್ಕೆ ಸಂವಾದಿಯಾದ ರೀತಿಯಲ್ಲಿಯೇ ಮಗುವಿನ ಭಾಷಿಕ ಉಪಾರ್ಜನೆಯೂ ಮುನ್ನಡೆಯುತ್ತದೆ. ವಾಕ್-ಭ್ರಂಶೀ ಶಿಶುಗಳ ಭಾಷಾ ವಿಸಂಘಟನೆಯಲ್ಲಿ ಇದರ ವಿಲೋಮಕ್ರಮ ಕಾಣದೊರೆಯುತ್ತದೆ. ಹುಟ್ಟಿನಿಂದ ದತ್ತವಾಗಿರುವ ಭಾಷಾಉಪಾರ್ಜನೆಯ ತಂತ್ರವನ್ನು ಕಂಡುಕೊಳ್ಳುವುದು ಹಾಗೂ ವಿವರಿಸುವುದು ಜೀವಭಾಷಾವಿಜ್ಞಾನಿಗಳ ಮುಂದಿರುವ ಕೆಲಸ. ಈ ಅರ್ಥದಲ್ಲಿ ವ್ಯಷ್ಟಿವಿಕಾಸದ ಭಾಷಿಕ ಇತಿಹಾಸದ ಕ್ಷೇತ್ರ ಅಥವಾ ಭಾಷಿಕ ವ್ಯಕ್ತಿ ಇತಿಹಾಸ (ಜೀವ) ಭಾಷಾವಿಜ್ಞಾನದ ಪ್ರಾಕ್-ಕಲ್ಪನೆಗಳಿಗೆ ಓರೆಗಲ್ಲಾಗುತ್ತದೆಂದು ಭಾವಿಸಲಾಗಿದೆ. 
III ಮಾತಿನ ಹಾಗೂ ಮಿದುಳಿನ ರಚನಾ-ವಿನ್ಯಾಸ: ಮಾತಿನ ಮಸ್ತಿಷ್ಕೀಯ ಸಂಘಟನೆ ಜೀವಭಾಷಾವಿಜ್ಞಾನ ಸಂಶೋಧನೆಯ ಮತ್ತೊಂದು ಪ್ರಮುಖ ಕ್ಷೇತ್ರಗಳನ್ನು ನಿಯಂತ್ರಿಸಿಕೊಂಡಿದೆ. ಮಾತಿನ ಉತ್ಪಾದನೆ ಹಾಗೂ ಗ್ರಹಣ ಕಾರ್ಯಗಳನ್ನು ನಿಯಂತ್ರಿಸುವ ಪ್ರಮಸ್ತಿಷ್ಕ ಮತ್ತು ಉಪ-ಪ್ರಮಸ್ತಿಷ್ಕ ಕ್ಷೇತ್ರಗಳನ್ನು ಕಂಡುಹಿಡಿಯುವುದೇ ಜೀವಭಾಷಾವಿಜ್ಞಾನಿಯ ಮುಖ್ಯ ಕಾರ್ಯವಾಗಿದೆ. ಮಿದುಳಿನ ಕಾರ್ಯವ್ಯಾಪಾರಗಳ ಬಗೆಗಿನ ನಮ್ಮ ಜ್ಞಾನಕ್ಕೆ ಆಧಾರವಾಗಿರುವ ಮೂರು ಆಕರಗಳೆಂದರೆ: 1. ಪ್ರಾಣಿಗಳ (ಮುಖ್ಯವಾಗಿ ಇಲಿಗಳ) ಪ್ರಾಯೋಗಿಕ ಅಧ್ಯಯನಗಳು; 2. ಗಾಯಗೊಂಡ ಅಥವಾ ಗೆಡ್ಡೆಗಳನ್ನುಳ್ಳ ರೋಗಿಗಳ ಬಗೆಗಿನ ಆಸ್ಪತ್ರೆ ಅಧ್ಯಯನಗಳು ಅಥವಾ ಚಿಕಿತ್ಸಾಲಯ ಅಧ್ಯಯನಗಳು; ಮತ್ತು 3. ಮಿದುಳಿನಲ್ಲಿನ ಗೆಡ್ಡೆಗಳ ನಿರ್ಮೂಲನಕ್ಕಾಗಿ ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಗಿರುವ ರೋಗಿಗಳ ಮಿದುಳನ್ನು ವಿದ್ಯುತ್ತಿನಿಂದ ಚೋದಿಸುವಾಗ ಉಂಟಾಗುವ ಪರಿಣಾಮಗಳ ಬಗೆಗಿನ ಅಧ್ಯಯನಗಳು.

	ಒಂದು ಶತಮಾನಕ್ಕೂ ಕೊಂಚ ಹಿಂದೆ, ಬ್ರೋಚನೆಂಬ ವೈದ್ಯ ಮಿದುಳಿನ ಎಡ ಅರ್ಧಗೋಳದಲ್ಲಿ ಭಾಷೆಯ ಪಾಶ್ರ್ವೀಕರಣವನ್ನು ಗುರುತಿಸಬಹುದೆಂದು ವರದಿಮಾಡಿದ. ಎಡ ಅರ್ಧಗೋಳದ ಮುಂಭಾಗದ ಮೂರನೆಯ ಪದರದಲ್ಲಿ ಸೀಳಿಕೆಗಳಾಗಿದ್ದರಿಂದ ಎರಡು ಪ್ರಸಂಗಗಳಲ್ಲಿನ ಭಾಷಿಕ ವಿಸಂಘಟನೆಯನ್ನು ಅವಲೋಕಿಸಿದ ಈ ವೈದ್ಯ ಪ್ರಮಸ್ತಿಷ್ಕದ ಈ ಭಾಗ ಉಚ್ಚರಿತ ವಾಣಿಯನ್ನು ಅಥವಾ ಮಾತಿನ ಕ್ರಿಯಾತ್ಮಕ ಚಟುವಟಿಕೆಗಳನ್ನು ನಿಯಂತ್ರಿಸುತ್ತದೆಂಬ ತೀರ್ಮಾನದತ್ತ ಧಾವಿಸಿದ. ಆದರೆ ಅನಂತರದ ಸಂಶೋಧನೆಗಳು ಈತನ ಈ ನಿಲುವನ್ನು ಸಮರ್ಥಿಸಲ್ಲಿಲ್ಲ. ಎಡ ಪ್ರಮಸ್ತಿಷ್ಕದಲ್ಲೆ ಭಾಷಿಕ ಕಾರ್ಯ ಆಂಶಿಕವಾಗಿಯಾದರೂ ಕೇಂದ್ರಿತವಾಗಿರುದೆಂಬುದು ತಂತ್ರಿಕಾ ವಿಜ್ಞಾನಿಗಳಲ್ಲಿ ಮತ್ತು ತಂತ್ರಿಕಾ ಮನೋವಿಜ್ಞಾನಿಗಳಲ್ಲಿ ಪ್ರಚಲಿತವಾಗಿರುವ ನಂಬಿಕೆ. ಅದಕ್ಕೆ ವಿಶಿಷ್ಟವಾದ ಪಥವೇನೂ ಇಲ್ಲ. ವ್ಯಕ್ತಿ ಎಡಚ ಅಥವಾ ಬಲಚ ಹೇಗಾದರೂ ಇರಲಿ, ಸಾಮಾನ್ಯವಾಗಿ ಎಡ ಅರ್ಧ ಗೋಳವೇ ಮಾತಿಗೆ ಮೂಲಭೂತವಾಗಿ ಕಾರಣವಾಗಿರುವಂಥ ಅಂಗಗಳಲ್ಲಿ ಒಂದಾಗಿರುತ್ತದೆ. ಪ್ರಾಸ್ತಾವಿಕ ಮಾತು ಅಥವಾ ಅಭಿಧಾನಾತ್ಮಕವಾದ ಅಥವಾ ಪ್ರಸ್ತಾಪರೂಪವಾದ ಮಾತು ಎಡ ಅರ್ಧಗೋಳದಲ್ಲಿ ಪಾಶ್ರ್ವೀಕೃತವಾಗಿರುವಲ್ಲಿ ಭಾಷೆಯ ಸ್ವಯಂಚಾಲಿತ ಉಪಯೋಗಕ್ಕೆ ಹಾಗೂ ಮಾತಿನ ಮಾಧುರ್ಯಕ್ಕೆ ಕಾರಣವಾಗುವ ಅಂಶಗಳು ಮಿದುಳಿನಲ್ಲಿ ದ್ವಿಪಾಶ್ರ್ವಿಕವಾಗಿ ಕೇಂದ್ರೀಕೃತವಾಗಿರುತ್ತದೆಂದು ವಾನ್ ಲ್ಯಾಂಕರ್ ದಯಾನಾ ವರದಿ ಮಾಡಿದ್ದಾರೆ. ಮಾತಿನ ಮಸ್ತಿಷ್ಕೀಯ ಸಂಘಟನೆಯ ಬಗೆಗೆ ಹೆಚ್ಚಿನ ವಿವರಗಳು ಎ.ಆರ್.ಲೂರಿಯಾ, ಪೆನ್‍ಫೀಲ್ಡ್ ಮತ್ತು ರಾಬಟ್ರ್ಸ್ ಹಾಗೂ ಗೆಸ್ಚ್‍ವಿಂಡ್ ಅವರ ಗ್ರಂಥಗಳಲ್ಲಿವೆ. ಪ್ರಮಸ್ತಿಷ್ಕವೂ ಪ್ರಮಸ್ತಿಷ್ಕದ ಭಾಗಗಳೂ ಮಾತಿನ ಉತ್ಪಾದನೆಯ ನೈಪುಣ್ಯವನ್ನುಳ್ಳ ರಚನೆಗಳನ್ನು ಒಳಗೊಂಡಿವೆ. ಇಷ್ಟಾಗಿಯೂ ಈ ರಚನೆಗಳ ಸ್ವರೂಪವಾಗಲೀ ಭಾಷಿಕ ಕಾರ್ಯಗಳ ವಿವಿಧ ಮುಖಗಳಿಗೂ ಅವಕ್ಕೂ ಇರುವ ಸಂಬಂಧವೇನು ಎಂಬುದಾಗಲೀ ಇನ್ನೂ ನಿಚ್ಚಳವಾಗಿ ತಿಳಿದು ಬಂದಿಲ್ಲ.

ಜೀವಭಾಷಾವಿಜ್ಞಾನದ ವಿಭಾಗಗಳು:	ಜೀವಭಾಷಾವಿಜ್ಞಾನದ ಸಮಸ್ಯೆಗಳನ್ನು ಎದುರಿಸುವುದಕ್ಕೆ ಅಗತ್ಯವಾದ ಅನೇಕ ವಿಧಾನಗಳು ಜೀವಭಾಷಾವಿಜ್ಞಾನಿಗಳಿಗೆ ಲಭ್ಯವಾಗಿವೆ. ಮೇಲೆ ಉಲ್ಲೇಖಿಸಲಾಗಿರುವ ಸಮಸ್ಯಾ ಕ್ಷೇತ್ರಗಳಲ್ಲಿ ವ್ಯವಹರಿಸುವಾಗ ನಾವು ಬಳಸುವ ಕೆಲವು ವಿಧಾನಗಳನ್ನು ವಿವರಿಸಲು ಪ್ರಯತ್ನಿಸಬಹುದು.

	i. ಭಾಷೆಯ ಹುಟ್ಟಿನ ಬಗೆಗಿನ ಸಮಸ್ಯೆಗಳೊಡನೆ ವ್ಯವಹರಿಸುವಾಗ ಜೀವಭಾಷಾವಿಜ್ಞಾನಿ ಜೈವವಾಸಿಕ ವಿಜ್ಞಾನಿಗಳು ಅಂಗರಚನಾಶಾಸ್ತ್ರಜ್ಞರು ಹಾಗೂ ಭಾಷಾವಿಜ್ಞಾನಿಗಳ ನೆರವನ್ನು ಪಡೆದುಕೊಳ್ಳುತ್ತಾನೆ.
ಜೈವವಾಸಿಕ ವಿಜ್ಞಾನಿಗಳು ವರ್ತನ ವಿಧಾನವನ್ನು ಅಭ್ಯಾಸ ಮಾಡುತ್ತಾರೆ. ಅವರ ವಿವರಣೆಗಳು ಪ್ರಾಣಿಗಳ ಸಂವಹನ ವ್ಯವಸ್ಥೆಯ ಬಗೆಗಿನ ವಿವರಗಳನ್ನೂ ಒಳಗೊಂಡಿರುತ್ತವೆ. ಮಾನವಭಾಷೆ ಸಂವಹನ ವ್ಯವಸ್ಥೆಯ ಆದಿಮ ರೂಪವೊಂದರಿಂದ ಉದ್ಭವವಾದಿಗಳು ಅಂದರೆ ವಿಕಾಸವಾದಿಗಳು ನಂಬಿರುವುದರಿಂದ ಜೈವವಾಸಿಕ ವಿಜ್ಞಾನಿಗಳು ಕೊಡುವ ಪ್ರಾಣಿ ಸಂವಹನ ವ್ಯವಸ್ಥೆಯ ಬಗೆಗಿನ ವಿವರಗಳು ಅವರಿಗೆ ತುಂಬ ಬೆಲೆಯುಳ್ಳವಾಗಿರುತ್ತವೆ. ಇಷ್ಟಾಗಿಯೂ ಅದು ಸುಲಭದ ಕೆಲಸವೇನಲ್ಲ. ಅದು ಅತಿದೀರ್ಘವೂ ಕಾಲಾಪಹಾರಕವೂ ಆದ ಕ್ರಮ. ಉದಾಹರಣೆಗೆ, ಬ್ರಿಟಿಷ್ ಜೈವವಾಸಿಕ ವಿಜ್ಞಾನಿ ಗೂಡಾಲಳಿಗೆ ಕೀನ್ಯದಲ್ಲಿನ ಸ್ವಾಭಾವಿಕ ನೆಲೆಯಲ್ಲಿ ಚಿಂಪಾಂಜಿóಗಳ ವರ್ತನ ಸ್ವರೂಪಗಳ ಮಾಡಲು ಹದಿನೈದು ವರ್ಷಗಳೇ ಬೇಕಾದುವು. 
ಮಾನವರ ಮತ್ತು ವಾನರ ಗಣದ (ಪ್ರೈಮೇಟುಗಳು) ಪ್ರಾಣಿಗಳ ತೌಲನಿಕ ಅಂಗರಚನಾಶಾಸ್ತ್ರೀಯ ಅಧ್ಯಯನದ ಮೂಲಕ, ಅಂಗರಚನಾಶಾಸ್ತ್ರಜ್ಞ ಅಮೂಲ್ಯವಾದ ಮಾಹಿತಿಯನ್ನು ಒದಗಿಸಬಲ್ಲ. ವಾನರ ಗಣದ ಪ್ರಾಣಿಗಳ ಮತ್ತು ಮಾನವರ ಸಂವಹನ ವ್ಯವಸ್ಥೆಗಳಲ್ಲಿನ ವ್ಯತ್ಯಾಸಗಳನ್ನು ವಿವರಿಸುವಲ್ಲಿ ಮಾನವರ ಮತ್ತು ವಾನರ ಗಣದ ಪ್ರಾಣಿಗಳ ರಚನೆಯಲ್ಲಿನ ವೈಷಮ್ಯಗಳ ಬಗೆಗಿನ ವಿವರಣೆಗೆಳು ಜೀವಭಾಷಾವಿಜ್ಞಾನಿಗಳಿಗೆ ಗಣನೀಯ ಪ್ರಮಾಣದಲ್ಲಿ ನೆರವಾಗುತ್ತವೆ.

ಮಾನವರ ಮತ್ತು ಪ್ರಾಣಿಗಳ ಸಂವಹನ ವ್ಯವಸ್ಥೆಗಳ ಬಗೆಗಿನ ತೌಲನಿಕ ಅಧ್ಯಯನಕ್ಕೆ ಭಾಷೆಯ ಬಗೆಗಿನ ಭಾಷಾವಿಜ್ಞಾನಿಗಳ ವಿಶ್ಲೇಷಣೆ-ವಿವರಣೆಗಳೂ ಬಹುವಾಗಿ ಉಪಯೋಗಕ್ಕೆ ಬರುತ್ತವೆ.

ಹೀಗೆ ಭಾಷೆಯ ವಿಕಾಸಾತ್ಮಕ ಇತಿಹಾಸವನ್ನು ಅರಸುವಲ್ಲಿ ಜೀವಭಾಷಾವಿಜ್ಞಾನಿಗಳು ಜೈವವಾಸಿಕ ವಿಜ್ಞಾನಿಗಳತ್ತ, ಅಂಗರಚನಾಶಾಸ್ತ್ರಜ್ಞರತ್ತ ಹಾಗೂ ಭಾಷಾವಿಜ್ಞಾನಿಗಳತ್ತ ನೆರವಿಗಾಗಿ ಕೈಚಾಚುತ್ತಾರೆ. ಜೀವಭಾಷಾವಿಜ್ಞಾನದ ವಿಧಾನಗಳೂ ಏಕೆ ವಿಜಾತೀಯ ಸ್ವರೂಪದವಾಗಿದೆ ಎಂಬುದನ್ನು ಇದು ವಿವರಿಸುತ್ತದೆ.

ii. ವ್ಯಷ್ಟಿ ವಿಕಾಸದ ಭಾಷಿಕ ಇತಿಹಾಸದ ಸಮಸ್ಯಾಕ್ಷೇತ್ರದಲ್ಲಿ ಬಹುವಾಗಿ ಬಳಸುವ ವಿಧಾನವೆಂದರೆ ಉದ್ಭವ ಜ್ಞಾನಸಿದ್ಧಾಂತ. ತಾತ್ತ್ವಿಕ ದೃಷ್ಟಿಯಿಂದ ಜ್ಞಾನವನ್ನು ಅಧ್ಯಯನ ಮಾಡುವುದೇ ಜ್ಞಾನಸಿದ್ಧಾಂತದ ಉದ್ದೇಶ. ಜೋನ್ ಪಿಯಾಗೆಯ ಹೆಸರಿನೊಡನೆ ಲಗತ್ತಾಗಿರುವ ಉದ್ಭವ ಜ್ಞಾನಸಿದ್ಧಾಂತ ಬುದ್ಧಿಮತ್ತೆಯ ವಿಕಾಸದ ಅಧ್ಯಯನಕ್ಕೆ ಸಂಬಂಧಪಟ್ಟಿದೆ. ಇಲ್ಲಿ ಬಳಸಲಾಗಿರುವ ಉದ್ಬವ ಶಬ್ದ, ಆರಂಭದಿಂದ ಹಿಡಿದು ಪರಿಪಕ್ವಾವಸ್ಥೆಯವರೆಗಿನ ಬೌದ್ಧಿಕ ರಚನೆಗಳ ವಿಕಾಸವನ್ನು ಸೂಚಿಸುತ್ತದೆ. ಇಲ್ಲಿಯೂ ಏನನ್ನು ಉಪಾರ್ಜಿಸಲಾಗುತ್ತದೆಂಬುದರ ಬಗೆಗಿನ ಭಾಷಾವಿಜ್ಞಾನಿಯ ವಿವರಣೆ ಹಾಗೂ ಭಾಷೆಯನ್ನು ಹೇಗೆ ಉಪಾರ್ಜಿಸಲಾಗುತ್ತದೆಂಬುದರ ಬಗೆಗಿನ ಮನೋವಿಜ್ಞಾನಿಯ ವಿವರಣೆ ದೈಹಿಕ ಪರಿಪಕ್ವತೆಯ ಮತ್ತು ಭಾಷಾ-ಉಪಾರ್ಜನೆಯ ವಿವಿಧ ಹಂತಗಳ ನಡುವಣ ಪರಸ್ಪರ ಸಂಬಂಧವನ್ನು ವಿವರಿಸುವಲ್ಲಿ ಭಾಷಾವಿಜ್ಞಾನಿಗೆ ನೆರವಾಗುತ್ತವೆ.

iii. ಭಾಷೆಯ ಮಸ್ತಿಷ್ಕೀಯ ಸಂಘಟನೆಯ ಬಗೆಗೆ ಮಾಹಿತಿಯನ್ನೊದಗಿಸುವ ಮುಖ್ಯ ಆಕರವೆಂದರೆ ವಾಕ್‍ಭ್ರಂಶದ ಹಾಗೂ ವಿಲಂಬಿತ ಭಾಷಾ ವಿಕಾಸದಂಥ ಭಾಷಾ ವಿಘ್ನಗಳ ಬಗೆಗಿನ ಪರಿಶೋಧನೆಗಳು. ವಾಕ್-ವಿಧಾನಶಾಸ್ತ್ರಜ್ಞರ ಪ್ರಕಾರ ವಾಕ್-ಭ್ರಂಶ ಮಿದುಳಿನ ವಾಕ್-ಕ್ಷೇತ್ರಗಳಿಗೆ ಉಂಟಾದ ಅಪಾಯ ಅಥವಾ ಪೆಟ್ಟಿನಿಂದ ಉಂಟಾಗುವ ಒಂದು ಬಗೆಯ ಭಾಷಾವೈಕಲ್ಯ.

ಭಾಷಾವೈಕಲ್ಯಗಳ ಬಗೆಗಿನ ಪರಿಶೋಧಗಳನ್ನು ಈ ಕೆಳಗೆ ಕಾಣಿಸಿರುವಂತೆ ವರ್ಗೀಕರಿಸಬಹುದು : (ಅ) ಚಿಕಿತ್ಸಾಲಯ ನೈದಾನಿಕ ಕ್ರಮದಲ್ಲಿ ವಯಸ್ಸಾದ ವ್ಯಕ್ತಿಗಳ ಮಸ್ತಿಷ್ಕ-ವಾಹಿಕೆಗಳ ಅಪಘಾತದ ಪರಿಣಾಮವನ್ನು ಹಾಗೂ ಮಧ್ಯವಯಸ್ಸಿನ ವ್ಯಕ್ತಿಗಳಲ್ಲಿನ ಮಸ್ತಿಷ್ಕ ರೋಗದ ಮತ್ತು ಅಭಿಘಾತದ ಪರಿಣಾಮಗಳನ್ನು ಅಭ್ಯಾಸ ಮಾಡಲಾಗುತ್ತದೆ. ಇಲ್ಲಿ ಬಳಸಲಾಗುವ ತಂತ್ರಗಳಿಂದಲೇ ಅನುಸಾಧನ ಪರೀಕ್ಷೆಗಳು ಹಾಗೂ ಮರಣೋತ್ತರ ನೈದಾನಿಕ ಪರಿಶೋದನೆಗಳು. (ಆ) ಚಿಕಿತ್ಸಾಲಯ-ಪ್ರಾಯೋಗಿಕ ಕ್ರಮದಲ್ಲಿ ಶಸ್ತ್ರಚಿಕಿತ್ಸಾರೋಗಿಗಳನ್ನು ಬಳಸಿಕೊಳ್ಳಲಾಗುತ್ತದೆ. ಶಸ್ತ್ರಕ್ರಿಯಾಪೂರ್ವದಲ್ಲಿ ಶಸ್ತ್ರಕ್ರಿಯೆಯ ಹಾಗೂ ಶಸ್ತ್ರಕ್ರಿಯಾನಂತರದಲ್ಲಿ ರೋಗಿಗಳನ್ನು ಅಭ್ಯಸಿಸಲಾಗುತ್ತದೆ. ಔಷಧಶಾಸ್ತ್ರೀಯ ವಾಕ್-ರೋಧ ಪ್ರಮಸ್ತಿಷ್ಕ ಚೋದನೆ ಹಾಗೂ ಪ್ರಮಸ್ತಿಷ್ಕ ಉಚ್ಛೇದನದ ತರುವಾಯ ವಾಕ್-ವರ್ತನೆಯ ಅವಲೋಕನ-ಇವು ಇಲ್ಲಿ ಬಳಸಲಾಗುವ ತಂತ್ರಗಳು. (ಇ) ಚಿಂತನಾತ್ಮಕ ಅಥವಾ ಸೈದ್ಧಾಂತಿಕ ಕ್ರಮ ಉದಾಹರಣೆಗೆ ಉಪಲಬ್ಧ ಸಾಹಿತ್ಯದಲ್ಲಿನ ಪ್ರಸಂಗ-ವರದಿಗಳನ್ನು ಶೋಧಿಸಲಾಗುತ್ತದೆ. ಇತರ ಪರಿಶೋಧಕರು ಒದಗಿಸಿದ ದತ್ತಾಂಶಗಳ ಸಾಂಖ್ಯೀಕ ವಿಶ್ಲೇಷಣೆಯೇ ಇಲ್ಲಿ ಬಳಸಲಾಗುವ ತಂತ್ರ. (ಈ) ಪ್ರಯೋಗ ವಿಷಯ ಕ್ರಮದಲ್ಲಿ ಸಾಮಾನ್ಯ ಭಾಷಾವಿಕಾಸವನ್ನು ಸಾಧಿಸಲಾರದೆ ಹೋದ ಮಕ್ಕಳನ್ನು ಅಧ್ಯಯನಕ್ಕೆ ಒಳಪಡಿಸಲಾಗುತ್ತದೆ. ಪೂರ್ವನಿರ್ಧಾರಿತ ವಿಧಾನಗಳನ್ನು ಬಳಸಿ ತೀರ್ವ ತರಬೇತಿಯನ್ನು ಕೊಡುವುದು ಹಾಗೂ ಸಾಧಿಸಲಾದ ಸುಧಾರಣೆಗಳನ್ನು ಗಮನಿಸುವುದು-ಇವು ಇಲ್ಲಿಯ ತಂತ್ರಗಳು.

ಭಾಷಾವಿಜ್ಞಾನದ ಬಗೆಗಿನ ಈ ಕಿರುಚಿತ್ರ ಭಾಷಾವಿಜ್ಞಾನದ ಸಮಸ್ಯೆಗಳ ಸಮಗ್ರ ಕ್ಷೇತ್ರವನ್ನು ತನ್ನ ಪರಿಧಿಯಲ್ಲಿ ಒಳಗೂಡಿಸಿಕೊಂಡಿಲ್ಲ. ಆದರೆ, ಇಲ್ಲಿ ಚರ್ಚಿಸಲಾಗಿರುವ ಸಮಸ್ಯೆಗಳು ಈ ಶಿಕ್ಷಣದ ಕೇಂದ್ರಭೂತ ಸಮಸ್ಯೆಗಳೆಂಬುದರಲ್ಲಿ ಅನುಮಾನವಿಲ್ಲ. ಜೀವವಿಜ್ಞಾನಿಗಳ, ಭಾಷಾವಿಜ್ಞಾನಿಗಳ ತಂತ್ರಿಕಾ ಮನೋವಿಜ್ಞಾನಿಗಳ, ಜೈವವಾಸಿಕವಿಜ್ಞಾನಿಗಳ ಮತ್ತು ವಿಕಾಸ ಮನೋವಿಜ್ಞಾನಿಗಳ ಸಹಪ್ರಯತ್ನದಿಂದ ಈ ಕಿರಿಯ ಅಂತರಶಿಕ್ಷಣ-ವಿಜ್ಞಾನಭಾಷೆಯ ಬಗೆಗಿನ ಜೀವವೈಜ್ಞಾನಿಕ ಪ್ರಶ್ನೆಗಳಿಗೆ ಸಮರ್ಪಕವಾದ ಉತ್ತರಗಳನ್ನು ಒದಗಿಸುತ್ತದೆಂದು ನಂಬಬಹುದಾಗಿದೆ.
(ಎ.ಬಿ.ಎಸ್.; ಹೆಚ್.ಎಸ್.ಎ.)
	
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ